ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸಂಘಟನೆ ಭಾಗವತರು. ರಂಗಭೂಮಿ, ಸುಗಮ ಸಂಗೀತ, ಸಾಹಿತ್ಯ, ಕಲೆ, ಮುಂತಾದ ಬಹುವಲಯಗಳಲ್ಲಿ ವಿಸ್ತಾರಗೊಂಡು ಕ್ರಿಯಾಶೀಲವಾಗಿರುವ ಸಂಘಟನೆ. ಹೊಸ ಆಲೋಚನೆ, ವಿಭಿನ್ನ ಕಾರ್ಯಕ್ರಮ ಮತ್ತು ವಿನೂತನ ಪ್ರಯೋಗಗಳಿಂದ ಬೆಂಗಳೂರಿನ ಸಾಂಸ್ಕೃತಿಕ ವಲಯದಲ್ಲಿ ‘ಸಂಚಲನ’ ಭಾವ ಸೃಷ್ಟಿಸಿ ಜನಪ್ರಿಯತೆ, ಜನರ ಪ್ರೀತಿ ಎರಡನ್ನೂ ದಕ್ಕಿಸಿಕೊಂಡಿದ್ದು ‘ಭಾಗವತರ’ ಹೆಮ್ಮೆ. ಹೊಸತನ್ನು ಕಟ್ಟುವ ತುಡಿತ, ಸಾಂಸ್ಕೃತಿಕ ಮಿಡಿತದ ಫಲವಾಗಿ 2001ರಲ್ಲಿ ಮೈದಳೆದದ್ದು ‘ಭಾಗವತರು’. ಇಷ್ಟು ವರ್ಷಗಳ ಸಾಂಸ್ಕೃತಿಕ ಪಯಣದಲ್ಲಿ ಭಾಗವತರು ಇಟ್ಟ ಹೆಜ್ಜೆ, ಮೂಡಿಸಿದ ಹೆಜ್ಜೆ ಗುರುತುಗಳು ಹಲವು. ಪಟ್ಟ ಪಾಡು-ಅನುಭವಿಸಿದ ಅಪಮಾನಗಳು ಅನೇಕ. ನೋವು-ನಲಿವು ಎಲ್ಲವನ್ನೂ ಸಮಭಾವದಿಂದ ಸ್ವೀಕರಿಸಿ ಅನುಭವಿಸಿ ದಶಕದ ಗಡಿ ದಾಟಿಯೂ ‘ಭಾಗವತರು’ ಮುನ್ನಡೆದಿದೆ.
ರಂಗಭೂಮಿಯ ಆಳ-ಅಗಲಗಳನ್ನು ವಿಸ್ತರಿಸಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ನಿರ್ದೇಶಕರಾದ ಆರ್. ನಾಗೇಶ್, ಮಾಸ್ಟರ್ ಹಿರಣ್ಣಯ್ಯ, ಬಿ. ವಿ. ಕಾರಂತ, ಸಿ.ಜಿ.ಕೆ ಮತ್ತು ಬಿ. ಜಯಶ್ರೀ ಅವರ ನಾಟಕೋತ್ಸಾ, ಉಮಾಶ್ರೀ ಅಭಿನಯದ ನಾಟಕಗಳ ಉತ್ಸವಗಳೂ ಸೇರಿದಂತೆ ಹಲವಾರು ನಾಟಕೋತ್ಸವಗಳನ್ನು ಆಯೋಜಿಸಿದ್ದು ನಮ್ಮೆಯ ಹಿರಿಮೆ. ಕನ್ನಡದ ಮಹತ್ವಪೂರ್ಣ ರಂಗ ಪ್ರಯೋಗಗಳು ‘ಭಾಗವತರು’ ಮೂಲಕ ಮರುಹುಟ್ಟು ಪಡೆದಿರುವುದು ಖುಷಿಯ ವಿಜಾರ.
ಸಮಕಾಲೀನ ರಂಗಭೂಮಿ ಸ್ಥಿತಿ-ಗತಿಗಳ ಕುರಿತು ಅನೇಕ ವಿಚಾರ ಸಂಕಿರಣಗಳು, ಉದಯೋನ್ಮುಖ ಹಾಗೂ ಹೆಸರಾಂತ ಲೇಖಕರ ಸಾಹಿತ್ಯ ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ಗಣ್ಯರಿಗೆ ಅಭಿನಂದನೆ, ಗೌರವಾರ್ಪಣೆ, ಸತತ 12 ಘಂಟೆಗಳ ಸಿ. ಅಶ್ವಥ್ ಗಾಯನೋತ್ಸವ, ವೈ.ಕೆ. ಮುದ್ದುಕೃಷ್ಣರ 24 ಘಂಟೆಗಳ ಬೀಳ್ಕೊಡುಗೆ ಸಂಗೀತ ಗುಚ್ಛ, ಹೀಗೆ ಹತ್ತು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಅಯೋಜಿಸಿ ಕಲಾ ರಸಿಕರಿಗೆ ಉಣಬಡಿಸಿ ಮುದ ನೀಡಿದ್ದು ‘ಭಾಗವತರು’ ಹಿರಿಮೆಗೆ ಗರಿಮೆ ಮೂಡಿಸಿದೆ.
ನಾಟಕ ಆಡಿಸುವುದಕ್ಕಿಂತ ನಾಟಕ ಮಡಿಸುವುದು ಮುಖ್ಯವೆನ್ನುವ ನಂಬಿಕೆಯಿಂದ ಹಳೆಯ ಯಶಸ್ವೀ ನಟಕಗಳ ಮರುಪ್ರಯೋಗಕ್ಕೆ ಮುಂದಾಗಿದ್ದು, ಹೊಸ ಪೀಳಿಗೆಗೆ ಹಳೆ ಪೀಳಿಗೆಯ ನಾಟಕಗಳನ್ನು ಪರಿಚಯಿಸಿದ್ದು ‘ಭಾಗವತರು’ ವೈಶಿಷ್ಟ್ಯ. ಭಿನ್ನ ಆಲೋಚನೆ, ಹೊಸತನದ ತುಡಿತಕ್ಕೆ ಸಂಘಟನಾ ಸಾಮರ್ಥ್ಯವೂ ಸಮರಸವಾಗಿ ಮಿಳಿತಗೊಂಡಿದ್ದರಿಂದಲೇ ಜನಮೆಚ್ಚುವ - ಜನಮಾಮನಸದಲ್ಲಿ ಉಳಿಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಯಿತು.